ಧರ್ಮಶ್ರೀ ಪ್ರತಿಷ್ಟಾನ(ರಿ.), ಈಶ್ವರಮಂಗಲ – ಈ ಸೇವಾಸಂಸ್ಥೆಯ ಇಚ್ಛಾಶಕ್ತಿ ಮತ್ತು ಕ್ರತು ಶಕ್ತಿಗಳ ಮೂರ್ತಸ್ವರೂಪವಾಗಿ ಆಂಜನೇಯ ಕ್ಷೇತ್ರವು ಎದ್ದು ನಿಂತಿದೆ!
ಹನ್ನೊಂದು ಅಡಿ ಎತ್ತರದ ಶ್ರೇಷ್ಟ ಕೃಷ್ಣಶಿಲೆಯಲ್ಲಿ ಕೆತ್ತಿದ ಪಂಚಮುಖಿ ಆಂಜನೇಯನ ಏಕಶಿಲಾ ವಿಗ್ರಹ, ವಿವರಣಾ ಫಲಕಗಳ ಸಮೇತ ರಾಮಾಯಣದ ಕಥಾನಕಗಳ ನೂರರಷ್ಟು ಶಿಲ್ಪಕಲೆಯ ಕೆತ್ತನೆಯ ಸೊಗಡು; ನಿಸರ್ಗದತ್ತ ಕಲ್ಲು ಬಂಡೆಗಳಲ್ಲಿ ಕೆತ್ತಲಾಗಿರುವ ಆಂಜನೆಯನ ಜೀವನದ ಪುಣ್ಯ ಕಥಾಪ್ರಸಂಗಗಳು; ದೇವ ಜೀವ ಸತ್-ಸಂಬಂಧ ಸೂಚಕ ರಾಮ-ಹನುಮರ ವಿಗ್ರಹಗಳು – ಇವು ಈ ಕ್ಷೇತ್ರದ ವಿಷೇಶತೆಗಳು. ಈ ಶತಮಾನದ ಅತ್ಯದ್ಭುತ ಕಾರ್ಯವೆಂದು ಪರಿಗನಿಸಬಹುದಾದ ಶಿಲ್ಪಕಲಾ ಪ್ರೌಢಿಮೆಯ ಶಿಲ್ಪ ವೈಭವಕ್ಕೆ ಇದೊಂದು ಅಪೂರ್ವ ಮಾದರಿ. ರಾಮ-ಲಕ್ಷ್ಮಣರ ಶುಶ್ರೂಷೆಗಾಗಿ ಹನುಮಂತನು ಪಂಚಮುಖಿ ಸ್ವರೂಪ ತಾಳಿ ಹಿಮಾದ್ರಿಯನ್ನು ಸೇರಿ ದ್ರೋಣಚಲವನ್ನೇ ಎತ್ತಿ ತಂದ ಘಟನೆಯು ರಾಮಯಣದ ಸಾಹಸಗಾಥೆ. ಸಂಜೀವಿನಿಯಂತಹ ಜೀವ ಸಂರಕ್ಷಕ ಗಿಡಮೂಳಿಕೆಗಳು, ಔಷಧೀಯ ಸಸ್ಯಗಳು ಸರ್ವಜನ ಮಾನ್ಯವಾಗಿದೆ. ಅಂತಹ ಸಸ್ಯ ಪ್ರಭೇದಗಳನ್ನು ಪೋಷಿಸುವ- ಪರಿಚಯಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ಶ್ರೀ ಕ್ಷೇತ್ರದಲ್ಲಿ “ಸಂಜೀವಿನಿ” ಉದ್ಯಾನವನ ನಿರ್ಮಾಣವಾಗಿದೆ. ಗೋ ಸಂರಕ್ಷಣೆಯ ಅಂಗವಾಗಿ ಗೋಶಾಲೆ ನಿರ್ಮಾಣ ಮಾಡುವುದು, ಗೋವುಗಳನ್ನು ಸಾಕುವುದು ಶ್ರೀಕ್ಷೇತ್ರದ ಯೋಜನೆಗಳಲ್ಲೊಂದು. ರಾಮಾಯಣ ಮಾನಸೋದ್ಯಾನ ಮತ್ತು ಹನುಮಾನ್ ಮಾನಸೋದ್ಯಾನಗಳು ಸಂದರ್ಶಕರಿಗೆ ತ್ರೇತಾಯುಗದ ನೆನಪನ್ನು ಹಟ್ಟಿಸುವಂತಿದೆ.
ಸಂಜೀವಿನಿ ವನದಿಂದ ಸ್ವಲ್ಪ ಎತ್ತರದಲ್ಲಿ ಲವಕುಶ ಅಥಿತಿಗೃಹವಿದೆ. ಒಂದೇ ಕಟ್ಟಡದಲ್ಲಿ ಎರಡು ವಿಭಾಗಗಳಿವೆ. ಅಥಿತಿಗಳು ಆಗಮಿಸಿದರೆ ವಸತಿ ವ್ಯವಸ್ಥೆ ಇದೆ. ನಾಲ್ಕಾರು ಹೆಜ್ಜೆ ಇಟ್ಟು ಮೆಲೇರಿದಾಗ ಹನುಮಗಿರಿಯ ಶಿರೊಭಾಗವು ಇದೆ. ಇಪ್ಪತ್ತು ಅಡಿ ಎತ್ತರದ ಶ್ರೀ ರಾಮನ ವಿಗ್ರಹವು ಸ್ಥಾಪಿಸುವ ಸಿದ್ದತೆ ನಡೆಯುತ್ತಿದೆ. ಈಗಾಗಲೇ ರಾಮಾಯಣದ ಹನುಮಾಯಣದ ಕಥಾನಕಗಳನ್ನು ಶಿಲ್ಪಕಲೆಗಳಲ್ಲಿ ಮೂರ್ತೀಭವಿಸಿದ ಕಾರ್ಕಲದ ಶಿಲ್ಪಿ ಗುಣವಂತೇಶ್ವರ ಭಟ್ಟರೇ ಶ್ರೀ ರಾಮನ ವಿಗ್ರಹ ಕೆತ್ತುವ ಕಾರ್ಯದಲ್ಲಿ ತೊಡಗಿರುತ್ತಾರೆ. ಆ ಸ್ಥಳದಲ್ಲಿ ಅಷ್ಟು ಎತ್ತರದ ಮೂರ್ತಿಯು ಸ್ಥಾಪಿಸಲ್ಪಟ್ಟಾಗ ಚತುರ್ದಿಕ್ಕುಗಳಿಗೂ ನೂರಾರು ಕಿಲೋಮೀಟ ದೂರದವರೆಗೆ ಶ್ರೀರಾಮನ ಕೃಪಾದೃಷ್ಟಿಯು ಹರಿಯಲಿದೆ ಎನ್ನುವುದು ಗಮನಾರ್ಹ ಅಂಶ.