ಶ್ರೀ ರಾಮಾಯಣ ಪ್ರಪಂಚದ ಆದಿ ಕಾವ್ಯ. ವಾಲ್ಮೀಕಿ ಆದಿ ಕವಿ. ಆದಿ ಅನ್ನುವುದರಿಂದಲೇ ಕವಿ, ಕಾವ್ಯಗಳ ಹಿರಿಮೆ ಸಾಧಿತವಾಗುವುದಿಲ್ಲ. ರಾಮಾಯಣ ಇಡೀ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮಹಾಕಾವ್ಯಗಳ ಮೊದಲ ಸಾಲಲ್ಲಿ ನಿಲ್ಲುತ್ತದೆ. ಈ ಮಹಾಕಾವ್ಯದಲ್ಲಿ ಅಭಿವ್ಯಕ್ತಿಗೊಂಡ ಮಹರ್ಷಿ ಮಹಾಕವಿ ವಾಲ್ಮೀಕಿಯ ಪ್ರತಿಭೆ ಅನನ್ಯವಾದುದು, ರಮ್ಯಾದ್ಭುತವಾದುದು.
ಭಾರತದಲ್ಲಂತೂ ಈ ಮಹಾಕಾವ್ಯ ಎಷ್ಟು ಪ್ರಸಿದ್ಧ ಮತ್ತು ಜನಪ್ರಿಯವಾಯಿತೆಂದರೆ ಅದು ಭಾರತದ ಎಲ್ಲಾ ಭಾಷೆಗಳಲ್ಲೂ ಅನುವಾದವಾಯಿತು. ಮಾತ್ರವಲ್ಲ, ಆಯಾಯ ಭಾಷೆಗಳ ಮಹಾಕವಿಗಳಿಂದ ಮರುರೂಪ ಪಡೆಯಿತು. ಭಾರತದ ಆಡುಭಾಷೆಗಳಲ್ಲೂ ರಾಮಯಣ ಒಂದೊಂದು ರೂಪದಲ್ಲಿ ಚಿತ್ರೀಕರನಗೊಂಡಿತು. ಮಾತ್ರವಲ್ಲ, ಇಂಡೋನೇಷ್ಯಾ, ಮಲೇಷಿಯಾ, ಥೈಲೇಂಡ್, ಲಂಕಾ, ಟಿಬೇಟ್, ಮೊರೀಶಸ್ – ಮೊದಲಾದ ಹತ್ತಿಪ್ಪತ್ತು ದೇಶಗಳಲ್ಲಿ ಬೇರೆ ಬೇರೆ ಬಗೆಯಾಗಿ ರಾಮಾಯಣ ಬರೆಯಲ್ಪಟ್ಟಿತು. ದಕ್ಷಿಣ ಕನ್ನಡ ಜಿಲ್ಲೆಯ ತುಳು ಆಡುಮಾತಿನಲ್ಲೂ ಎಡನೀರು ಮಠದ ಹತ್ತಿರದ ಪಕ್ರು ಎಂಬ ದಲಿತ ಸಮಾಜದವನ ಬಾಯಿಯಲ್ಲಿ ಅತ್ಯಂತ ಮಾರ್ಮಿಕವಾದ ಬಗೆಯ ರಾಮಾಯಣ ಒಂದು ಹೊರಬಂದು ದಾಖಲೆಗೊಂಡಿದೆ. ಪ್ರಪಂಚದಲ್ಲೇ ಇಷ್ಟು ಬಗೆಯಲ್ಲಿ ರೂಪುಗೊಂಡುದು ರಾಮಾಯಣ ಒಂದೇ.
ಕನ್ನಡದಲೇ ತೆಕ್ಕೊಳ್ಳಿ, ಎಷ್ಟು ಬಗೆಯಲ್ಲಿ ರಾಮಾಯಣ ರೂಪುಗೊಂಡಿದೆ ಅಂದರೆ ಅದನ್ನು ನೋಡಿದರೇ ನಾವು ಆಶ್ಚರ್ಯದಿಂದ ಬೆರಗಾಗುತ್ತೇವೆ. ಕುಮಾರವ್ಯಾಸ ತನ್ನ ಗದುಗಿನ-ಭಾರತದ ಮೊದಲಲ್ಲೇ ಹೇಳುತ್ತಾನೆ – “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ” ಎಂದು. ಕನ್ನಡದ ಇನ್ನೊಬ್ಬ ಮಹಾಕವಿ ಮುದ್ದಣ ತನ್ನ ನಲ್ಲೆ ಮನೋರಮೆಗೆ ಹೇಳುತ್ತಾನೆ – “ಶತಕೋಟಿ ರಾಮಾಯಣಂಗಳಿಹವು” ಎಂದು! ಈ ಉತ್ಪ್ರೇಕ್ಷಗಳನ್ನು ಬಿಟ್ಟರೂ ಭಾರತದ ಸಮಗ್ರ ಜನಕೋಟಿಯ ಹೃಧಯದಲ್ಲೂ ರಾಮಾಯಣಾದ ಕಥಾವಸ್ತು ಗೌರವಾದರಗಳೊಡನೆ ಸ್ಥಾಪಿತಗೊಂಡಿದೆ. ಇಂತಹ ಮಹಾಕಾವ್ಯ ಒಂದರ ಮಹಾನಾಯಕನ ಒತ್ತಿನಲ್ಲೇ ಕಾಣಬಹುದಾದ ಒಂದು ಪಾತ್ರ ಕಪಿಕುಲದ ಆಂಜನೇಯ.
ಶ್ರೀ ರಾಮಾಯಣ ಮಹಾಕಾವ್ಯವನ್ನು ಓದುತ್ತಾ ಓದುತ್ತಾ ಶ್ರೀರಾಮಚಂದ್ರ ಸೀತಾದೇವಿ, ಲಕ್ಷ್ಮಣ ಮೊದಲಾದ ಪಾತ್ರಗಳು ನಮ್ಮ ಅಂತರಂಗದಲ್ಲಿ ಯಾವ ಮಟ್ಟಿಗೆ ಗೌರವಾದರಗಳಿಗೆ ಪಾತ್ರವಾಗುತ್ತೋ ಅಷ್ಟೇ ಅದರ, ಪ್ರೀತಿಗಳಿಗೆ ಆಂಜನೇಯನೂ ಭಾಜನನಾಗುತ್ತಿದ್ದಾನೆ. ನಮ್ಮೊಳಗೆ ಅಮರನಾಗಿ ಉಳಿಯುತ್ತಾನೆ. ಇದಕ್ಕೆ ಕಾರಣ ಕಪಿಕುಲದಲ್ಲಿ ಹುಟ್ಟಿಯೂ ಅವನಲ್ಲಿರುವ ನಡೆನುಡಿಗಳ ಸಂಸ್ಕಾರ; ರಾಮನ ಮೇಲಿರುವ ಭಕ್ತಿ, ಸೀತೆಯ ಮೇಲಿರುವ ಆದರದಿಂದಾಗಿ ಅವ ನಮ್ಮ ಗೌರವಕ್ಕೆ ಪಾತ್ರನಾಗುತ್ತಾನೆ.
ಶ್ರೀರಾಮಾಯಣದ ಉತ್ತರಕಾಂಡವನ್ನು ಹೊರತುಪಡಿಸಿ ಏಳು ಕಾಂಡಗಳಲ್ಲಿ ಚಿತ್ರಿಕರಣಾವಾಗಿದೆ. ಬಾಲಕಾಂಡ, ಆಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಯುದ್ಧಕಾಂಡ – ಹೀಗೆ ರಾಮನ ಹುಟ್ಟಿನಿಂದ ಮೊದಲುಗೊಂಡು, ರಾವಣ ವಧೆಯಾಗಿ, ಶ್ರೀರಾಮನ ಪಟ್ಟಾಭಿಷಿಕ್ತನಾಗುವ ವರೆಗೆ ಏಳು ಕಾಂಡಗಳಿವೆ. ಇದರಲ್ಲಿ ನಾಲ್ಕನೇಯ ಕಿಷ್ಕಿಂಧಾಕಾಂಡದ ಬಳಿಕ ಆಂಜನೇಯನ ಪ್ರವೇಶವಾಗುತ್ತದೆ. ಕೊನೆಯ ಮೂರು ಕಾಂಡಗಳಲ್ಲಷ್ಟೇ ಆಂಜನೇಯನ ಪಾತ್ರ ಚಿತ್ರಿತವಾಗಿದ್ದರೂ, ರಾಮಯಣವನ್ನು ಪೂರ್ತಿಯಾಗಿ ಓದಿದ ಬಳಿಕ ಸಹೃದಯರಿಗೆ ರಾಮಾಯಣಾದ ಉದ್ದಕ್ಕೂ ಆಂಜನೇಯವಿದ್ದಂತೆ ಬಾಸವಾಗುತ್ತದೆ. ಆತನನ್ನುಳಿದು ರಾಮಾಯಣವೇ ಇಲ್ಲ ಅನ್ನುವಷ್ಟು ಗಾಢವಾಗಿ ಆ ಪಾತ್ರ ನಮ್ಮನ್ನು ಸೆರೆಹಿಡಿಯುತ್ತದೆ; ಮೋಡಿ ಮಾಡುತ್ತೆ.
ಪ್ರಾಜ್ಞತೆ ಮತ್ತು ಪ್ರಭುದ್ಧತೆಗೆ ಸರಿಸಾಟಿ ಇಲ್ಲದ ಒಂದು ವ್ಯಕ್ತಿತ್ವ, ವಾನರನಾಗಿಯು ನರಶ್ರೇಷ್ಠರ ಸರಿದೊರೆಯಾಗಿ ನಿಲ್ಲಬಲ್ಲ ಪಾತ್ರ ದೈವೀಚೇತನದೊಂದಿಗೆ ಸಂಪೂರ್ಣ ಶರಣಾಗತಿಯಲ್ಲೇ ತನ್ನ ವ್ಯಕ್ತಿತ್ವದ ಅನನ್ಯತೆಯನ್ನು ಮೆರೆದ ಜೀವ, ತನ್ನ ಗುಣಗಳ ಸಮುಚ್ಛಯದಿಂದಲೇ ಅಮರವಾಗುತ್ತದೆ; ಚಿರಂಜೀವಿಯಾಗುತ್ತದೆ. ಇಂದು ಸಮಗ್ರ ಭಾರತದಲ್ಲಿ ನಾಯಕನಿಗೆ ಸಮನಾಗಿ ಪೂಜೆಗೊಳ್ಳುತ್ತಿರುವ ಮಹಾಪಾತ್ರ ಆಂಜನೇಯನೊಬ್ಬನೇ! ಜೈ ಹನುಮಾನ್ .